ಅಳಿಕೊಳಪು

ಮೈಯಲ್ಲಿ ಎಲ್ಲಾದರೂ ಒಂದೆಡೆಯ ಊತಕ (ಟಿಷ್ಯೂ) ಸತ್ತರೆ ಅದಕ್ಕೆ ಅಳಿಕೊಳಪು (ಗ್ಯಾಂಗ್ರಿನ್) ಎನ್ನುತ್ತಾರೆ. ಕೈಕಾಲುಗಳಲ್ಲಿ ಸಾಮಾನ್ಯವಾದರೂ ಪೆಟ್ಟುಗಳು, ಉರಿತ, ಅನುವಳಿಕೆಗಳಿಂದ (ಡಿಜನರೇಷನ್ಸ್) ಆ ಭಾಗದ ರಕ್ತ ಪೂರೈಕೆಗೆ ಆತಂಕವಾಗಿ ಪುಷ್ಟಿಗೆಟ್ಟು ಹೀಗಾಗುತ್ತದೆ. ಕುರುಗಳು, ಹಿಮಗಚ್ಚು (ಫ್ರಾಸ್ಟ್‍ಬೈಟ್), ಜಜ್ಜುಗಾಯಗಳು, ಸಿಹಿಮೂತ್ರ, ಕ್ಷಯ, ಉಪದಂಶ (ಸಿಫಿಲಿಸ್), ರೇನಾಡನ ರೋಗ, ಕೂಡ್ಗರಣಿನಾಳುರಿತದ ಮುಚ್ಚಿಗೆ (ಬರ್ಜರನ ರೋಗ: ತ್ರಾಂಬೋ ಆ್ಯಂಜಿಯೈಟಿಸ್ ಆಬ್ಲಿಟರಾನ್ಸ್), ಸೊಕ್ಕಿನ (ಟೈಫಸ್) ಜ್ವರ, ಧಮನಿಪೆಡಸಣೆ (ಆರ್ಟೀರಿಯೋಸ್ಕ್ಲೀರೋಸಿಸ್) ಈ ಬೇನೆಗಳಲ್ಲಿ ಅಳಿಕೊಳಪು ಆಗುವುದು ಸಾಮಾನ್ಯ. ಆಳವಾಗಿ ಸುಟ್ಟಗಾಯ ಆದಾಗಲೂ, ತಿಂಗಳುಗಟ್ಟಲೆ ಹಾಸಿಗೆ ಹಿಡಿದಾಗಲೂ (ಕುಂಟುಹುಣ್ಣು; ಬೆಡ್‍ಸೋರ್) ಆಗಬಹುದು. ಸತ್ತಿರುವ ಮೆತ್ತನೆಯ ಭಾಗ ಗೋಚು (ಸ್ಲಫ್), ಸತ್ತಿರುವ ಮೂಳೆ ಚೂರು ಹೊರಚಿಕ (ಸೆಕ್ವೆಸ್ಟ್ರಂ) ಎಂದಿವೆ. ಇವನ್ನು ತೆಗೆದುಹಾಕಿದರೇ ಹುಣ್ಣು ಮಾಯುವುದು. ಅಳಿಕೊಳಪು ಒಣಕಲಾಗಿರಬಹುದು. ಇಲ್ಲವೇ ತೇವಗೂಡಿರಬಹುದು. ಜೊತೆಗೆ ಸೋಂಕು ಹತ್ತಿ ವಿಷವೇರುವುದರಿಂದ, ತೇವಗೂಡಿದ್ದರೆ ಬಲು ಅಪಾಯಕರ. ಕರುಳಲ್ಲೂ ಪುಪ್ಪುಸದಲ್ಲೂ ಹೀಗಾದರೆ ಪ್ರಾಣಕ್ಕೆ ಸಂಚಕಾರ. ಒಣಕಲಾಗಿ ಇರುವುದನ್ನು ತೇವಗೂಡದಂತೆ ನೋಡಿಕೊಳ್ಳುವುದು ಬಲು ಮುಖ್ಯ. ಅನಿಲದ ಅಳಿಕೊಳಪು (ಗ್ಯಾಸ್ ಗ್ಯಾಂಗ್ರಿನ) ಕ್ಲಾಸ್ಟ್ರಿಡಿಯಂ ಗುಂಪಿನ ಅನಿಲದ ದಂಡಾಣುಜೀವಿಯಿಂದಾದ ಸೋಂಕು. ಗಾಯದ ಆಳದಲ್ಲಿ ಅಮ್ಲಜನಕ ಇಲ್ಲದೆಡೆ ಈ ಸೋಂಕು ಹೆಚ್ಚು. ಅಳಿಕೊಳಪಿನ ಚಿಕಿತ್ಸೆ ಅದರ ಕಾರಣಕ್ಕೆ ತಕ್ಕಂತಿರಬೇಕು. (ನೋಡಿ- ಅಳಿಗೊಳೆತ)						       
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ